ಕುಲುಕು ಮೆಲುಕಿನ ಬಾತು

ಪಕ್ಷಿವರ್ಗದ ಆನ್ಸೆರಿಫಾರ್ಮೀಸ್ ಗಣದ ಅನಾಟಿಡೀ ಕುಟುಂಬಕ್ಕೆ ಸೇರಿದ ಡ್ಯಾಫಿಲ ಅಕ್ಯೂಟ ಅಥವಾ ಅನಾಸ್ ಅಕ್ಯೂಟ ಎಂಬ ವೈಜ್ಞಾನಿಕ ಹೆಸರಿನ ಹಕ್ಕಿ (ಪಿನ್ ಟೇಲ್). ಇದರ ಬಾಲದಲ್ಲಿನ ಮಧ್ಯದ ಗರಿಗಳು ಬಲು ಉದ್ದ ಹಾಗು ಚೂಪಾಗಿದ್ದು ನೀರಿನಲ್ಲಿ ಹಕ್ಕಿ ಈಜುವಾಗ ಕುಲುಕಾಡುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಉತ್ತರ ಅಮೇರಿಕ, ಸಿಂಹಳ, ಭಾರತ, ಪನಾಮ ಮುಂತಾದೆಡೆಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತದೆ. ಬಾತು ಕೋಳಿಯನ್ನು ಹೋಲುತ್ತದೆ. ಇದರ ಉದ್ದ ಸುಮಾರು 21/2-3' ಗಂಡುಹಕ್ಕಿಗೆ ಆಲಿವ್-ಕಂದು ಬಣ್ಣದ ಕತ್ತು ಮತ್ತು ತಲೆ, ಬೂದಿ ಬಣ್ಣದ ಬೆನ್ನುಭಾಗ ಹಾಗು ಬಿಳಿಯ ಹೊಟ್ಟೆಭಾಗ ಇವೆ. ಹೊಟ್ಟೆಭಾಗದ ಬಿಳಿಯ ಬಣ್ಣ ಕತ್ತಿನ ಎರಡು ಪಕ್ಕಗಳಲ್ಲಿ ವಿಸ್ತರಿಸಿದೆ. ಹೆಣ್ಣು ಹಕ್ಕಿ ಮಾಸಲು ಕಂದುಬಣ್ಣದ್ದು. ಗಂಡು ಸಿಳ್ಳು ಹಾಕುವಂತೆ ಕೂಗುತ್ತದೆ. 
(ಎಲ್.ಎಸ್.ಜಿ.) 
(ಪರಿಷ್ಕರಣೆ: ಕೆ ಎಸ್ ನವೀನ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ